ಯಕ್ಷ - ಮೊತ್ತಮೊದಲು ಸೃಷ್ಟಿಯಲ್ಲಿ ಚತುರ್ಮುಖ ಹುಟ್ಟಿದ. ತರುವಾಯ ಚತುರ್ಮುಖ ಜಲವನ್ನು ಸೃಷ್ಟಿಸಿದ. ಈ ಜಲದ ರಕ್ಷಣೆಗಾಗಿ ಕೆಲವು ಪ್ರಾಣಿಗಳನ್ನು ಜೊತೆಯಲ್ಲಿಯೇ ಸೃಜಿಸಿದ. ಈ ಪ್ರಾಣಿಗಳೆಲ್ಲವು ಬಹಳ ಹಸಿವು ನೀರಡಿಕೆಗಳಿಂದ ಕೂಡಿದ್ದವು. ತಮ್ಮನ್ನು ಸೃಜಿಸಿದ ಬ್ರಹ್ಮನ ಬಳಿಗೆ ಬಂದು ತಮ್ಮ ಕೆಲಸವೇನೆಂದು ಕೇಳಿಕೊಂಡವು ಚತುರ್ಮುಖ ಈ ಜಲವನ್ನು ರಕ್ಷಿಸಿರಿ ಎಂದ. ಇದನ್ನು ಕೇಳಿ ಕೋಪಗೊಂಡ ಕೆಲವು ಪ್ರಾಣಿಗಳೂ ಜಲವನ್ನು ಕುಡಿದವು. ಮೆತ್ತೆ ಕೆಲವು ರಕ್ಷಣೆಯನ್ನು ಮಾಡಿದುವು. ನೀರು ಕುಡಿದವರನ್ನು ಯಕ್ಷ ಎಂತಲೂ ನೀರನ್ನು ರಕ್ಷಿಸಿದವರನ್ನು ರಕ್ಷ (ರಾಕ್ಷಸ) ಎಂತಲೂ ಕರೆದ. ಹೀಗೆ ಯಕ್ಷರ ಉತ್ಪತ್ತಿ.

ಯಕ್ಷರ ಅಧಿಪತಿ ಕುಬೇರ. ಇವನ ಪ್ರಜೆಗಳೇ ಯಕ್ಷರು. ದೇವತೆಗಳಲ್ಲಿ ಇವರದೊಂದು ಪಂಗಡ. ಕಾವೇರಿ, ನರ್ಮದಾ, ನದಿಗಳ ಸಂಗಮವಾದ ಪವಿತ್ರ ತೀರ್ಥ ಕ್ಷೇತ್ರದಲ್ಲಿ ಸ್ನಾನ ಮಾಡಿ ಮಹಾದೇವನನ್ನು ಪೂಜಿಸಿದ ಕಾರಣ ಕುಬೇರ ಯಕ್ಷ ರಾಜ್ಷಾಧಿಪತಿಯಾದ.

	ಕುಬೇರನ ಅಸ್ಥಾನದಲ್ಲಿ ಶಂಖಪದ್ಮ, ಮಣಿಭದ್ರ, ಶ್ವೇತಛತ್ರ, ಗುಹ್ಯಕ, ಸ್ರೂಣಕ, ಸೂರ್ಯಭಾನು, ವೇಣು, ಗಂಡಪಿಂಡ, ವೃಷಾರ, ದೃಮ, ಹಿಮಚಂದ್ರ, ಪಿಂಗಳಾಕ್ಷ, ಪ್ರಪಾಲಕ ಮೊದಲಾದ ಅನೇಕ ಯಕ್ಷರು ಕುಬೇರನನ್ನು ಓಲೈಸುತ್ತಿರುತ್ತಾರೆಂದು ಪುರಾಣ ಪ್ರತೀತಿ.										
(ವಿ. ಎಂ. ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ